ಏಷ್ಯಾಟಿಕ್ ಸೊಸೈಟಿ ಆಫ್ ಬಾಂಬೆ:   ಪಶ್ಚಿಮ ಭಾರತದಲ್ಲಿ ಪ್ರಾಚ್ಯಶಾಸ್ತ್ರ, ಭಾಷಾವಿಜ್ಞಾನ, ಭೂಗೋಳ, ಇತಿಹಾಸ ಹಾಗೂ ಭಾರತೀಯ ಸಾಹಿತ್ಯ ಸಂಶೋಧನೆಗಾಗಿ ರೂಪುಗೊಂಡಿರುವ ಸಂಸ್ಥೆ. ಬೊಂಬಾಯಿಯ ರಿಕಾರ್ಡರ್ ಹುದ್ದೆಯಲ್ಲಿದ್ದ ಸರ್ ಜೇಮ್ಸ್‌ ಮ್ಯಾಕಿಂಟಾಷನಿಂದ 1804À ನವೆಂಬರ್ 26ರಂದು ಲಿಟರರಿ ಸೊಸೈಟಿ ಅಫ್ ಬಾಂಬೆ ಎಂಬ ಹೆಸರಿನಿಂದ ಪ್ರಾರಂಭವಾಗಿ, 1829ರಲ್ಲಿ ದಿ ರಾಯಲ್ ಏಷ್ಯಾಟಿಕ್ ಸೊಸೈಟಿ ಆಫ್ ಗ್ರೇಟ್ ಬ್ರಿಟನ್ ಅಂಡ್ ಐರ್ಲೆಂಡಿನ ಅಂಗಸಂಸ್ಥೆಯಾದ ಮೇಲೆ ಈ ಹೆಸರು ಪಡೆಯಿತು. ಲಿಟರರಿ ಸೊಸೈಟಿ ಎಂಬ ಹೆಸರು ತಳೆದಿದ್ದಾಗ ಸರ್ ಮ್ಯಾಕಿಂಟಾಷ್ ಈ ಸಂಸ್ಥೆಯ ಪ್ರಥಮ ಅಧ್ಯಕ್ಷನಾಗಿ ಆಯ್ಕೆಯಾದ. ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿ ಇವರುಗಳಿದ್ದ ಇದರ ಕಾರ್ಯಕಾರಿ ಸಮಿತಿ ಕ್ರಮೇಣ ಬೆಳೆದು, ನಾಲ್ಕು ಜನ ಉಪಾಧ್ಯಕ್ಷರನ್ನೂ ಒಬ್ಬ ಸಹಕಾರ್ಯದರ್ಶಿಯನ್ನೂ ಪಡೆಯಿತು. ಬೊಂಬಾಯಿ ಪ್ರಾಂತ್ಯದ ಗವರ್ನರನ್ನು ಇದರ ಪೋಷಕರ ಸ್ಥಾನಕ್ಕೆ ನಿವೇದಿಸಲಾಯಿತು.

ಸ್ಥಾಪನೆಯಾದ ಕೆಲವೇ ವರ್ಷಗಳಲ್ಲಿ ಇದು ಗಮನಾರ್ಹ ಪ್ರಗತಿ ಸಾಧಿಸಿತು. ಪ್ರ.ಶ.1819ರಲ್ಲಿ ಇದರ ಟ್ರಾನ್ಸ್ಯಾಕ್ಷನ್ ಆಫ್ ದಿ ಲಿಟರೆರಿ ಸೊಸೈಟಿ ಎಂಬ ಪತ್ರಿಕೆಯ ಮೂರು ಸಂಪುಟಗಳು ಪ್ರಕಟವಾದುವು. ಏಷ್ಯಾಟಿಕ್ ಸೊಸೈಟಿ ಆಫ್ ಗ್ರೇಟ್ ಬ್ರಿಡನ್ ಅಂಡ್ ಐರ್ಲೆಂಡ್ ಸಂಸ್ಥೆಯ ಸೂಚನೆಯ ಪ್ರಕಾರ ಅದರ ಅಂಗಸಂಸ್ಥೆಯಾದ ಮೇಲೆ ಈ ಎರಡು ಸಂಸ್ಥೆಗಳಲ್ಲಿ ಯಾವುದೇ ಒಂದರ ಸದಸ್ಯರಾಗಿದ್ದವರಿಗೆ ಇನ್ನೊಂದರ ಸದಸ್ಯತ್ವವೂ ಲಭಿಸುವಂತಾಯಿತು. 1955ರಿಂದೀಚಿಗೆ ಈ ಸಂಸ್ಥೆ ಏಷ್ಯಾಟಿಕ್ ಸೊಸೈಟಿ ಆಫ್ ಬಾಂಬೆ ಎಂದು ವಿದಿತವಾಗಿದೆ.
1829ರಿಂದ 1841ರ ವರೆಗೆ ಈ ಸಂಸ್ಥೆಯ ಕಾರ್ಯಕಲಾಪಗಳು ಹಾಗೂ ಸಂಶೋಧನ ಪ್ರಬಂಧಗಳು ದಿ ರಾಯಲ್ ಏಷ್ಯಾಟಿಕ್ ಸೊಸೈಟಿಯ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು. 1841ರಲ್ಲಿ ಈ ಸಂಸ್ಥೆ ತನ್ನದೇ ಆದ ಜರ್ನಲ್ ಆಫ್ ದಿ ಬಾಂಬೆ ಬ್ರಾಂಚ್ ಆಫ್ ದಿ ರಾಯಲ್ ಏಷ್ಯಾಟಿಕ್ ಸೊಸೈಟಿ ಎಂಬ ನಿಯತಕಾಲಿಕವನ್ನು ಪ್ರಕಟಿಸಲು ಆರಂಭಿಸಿತು. 1925ರವರೆಗೆ ಇದರ ಗೌರವ ಕಾರ್ಯದರ್ಶಿಯೇ ಸಂಪಾದಕನ ಕಾರ್ಯನಿರ್ವಹಿಸುತ್ತಿದ್ದ. ಈ ಪತ್ರಿಕೆಯ ಪ್ರಥಮ ಸಂಪಾದಕ ಓರ್ಲಿಬರ್ 1842ರಲ್ಲಿ ನಿವೃತ್ತನಾದ ಮೇಲೆ ಅವನ ಸ್ಥಾನಕ್ಕೆ ಬಂದ ಜಾನ್ ಗ್ರ್ಯಾಂಟ್ ಮಾಲ್ಕಮ್ಸನನ ನೇತೃತ್ವದಲ್ಲಿ ಈ ಸಂಸ್ಥೆ ಅನೇಕ ರೀತಿಗಳಲ್ಲಿ ಪ್ರಗತಿ ಸಾಧಿಸಿತು. ಈತನ ಕಾಲದಲ್ಲಿ ಸ್ಥಾಪಿತವಾದ ವಸ್ತುಸಂಗ್ರಹಾಲಯ ಕ್ರಮೇಣ ಬೆಳೆದು ಇಂದು ಪ್ರಿನ್ಸ್‌ ಆಫ್ ವೇಲ್ಸ್‌ ಮ್ಯೂಸಿಯಂ ಎಂಬ ಹೆಸರಿನಿಂದ ವಿಖ್ಯಾತವಾಗಿದೆ. 1925ರಿಂದ ಈ ಸಂಸ್ಥೆಯ ನಿಯತಕಾಲಿಕದ ಎರಡನೆಯ ಶ್ರೇಣಿ ಪ್ರಾರಂಭವಾಗಿದ್ದು ಆ ವರ್ಷದಿಂದ ಪತ್ರಿಕೆಯ ಸಂಪಾದಕತ್ವ ಗೌರವ ಕಾರ್ಯದರ್ಶಿಯಿಂದ ಬೇರೆಯಾಗಿ ಆ ಕೆಲಸಕ್ಕೆ ಗಣ್ಯ ವಿದ್ವಾಂಸರನ್ನು ನಿಯಮಿಸಲಾಗುತ್ತಿದೆ. ಇವರಲ್ಲಿ 1925 ರಿಂದ 1942ರವರೆಗೆ (ಸಂಪುಟ 1-28) ಸಂಪಾದಕತ್ವ ವಹಿಸಿದ್ದ ವಿ.ಎಸ್. ಸುಕ್ತಂಕರ್ ಮತ್ತು 1942ರಿಂದ ಈ ಕಾರ್ಯ ನಿರ್ವಹಿಸುತ್ತಿರುವ ಪಿ.ವಿ. ಕಾಣೆ ಈ ಪತ್ರಿಕೆಯ ಏಳಿಗೆಗೆ ಅವಿರತ ಶ್ರಮಿಸಿದ್ದಾರೆ. ಈ ಪತ್ರಿಕೆಯ 68ಕ್ಕೂ ಅಧಿಕ ಸಂಪುಟಗಳು ಬೆಳಕಿಗೆ ಬಂದಿವೆ.
ಕಳೆದ ಸುಮಾರು 166 ವರ್ಷಗಳಲ್ಲಿ ಈ ಸಂಸ್ಥೆ ವಿವಿಧ ರೀತಿಗಳಲ್ಲಿ ಸೇವೆ ಸಲ್ಲಿಸಿ ಭಾರತೀಯ ಸಂಶೋಧನ ಕ್ಷೇತ್ರದಲ್ಲಿ ತನ್ನದೇ ಆದ ಒಂದು ಸ್ಥಾನ ಗಳಿಸಿದೆ. 1831ರಲ್ಲಿ ಸ್ಥಾಪಿತವಾದ ಬಾಂಬೆ ಜಿಯೋಗ್ರಾಫಿಕ್ ಸೊಸೈಟಿ ಈ ಸಂಸ್ಥೆಯೊಂದಿಗೆ 1873ರಲ್ಲಿ ವಿಲೀನವಾಯಿತು. 1831ರಲ್ಲಿ ಆ ಸಂಸ್ಥೆಯ ಇಂಗ್ಲೆಂಡಿನ ಓರಿಯಂಟಲ್ ಟ್ರಾನ್ಸ್ಯಾಕ್ಷನ್ ಕಮಿಟಿಯವರಿಗೆ ಭಾರತೀಯ ಗ್ರಂಥಗಳ ಇಂಗ್ಲಿಷ್, ಫ್ರೆಂಚ್ ಹಾಗೂ ಲ್ಯಾಟಿನ್ ಭಾಷಾಂತರ ಒದಗಿಸುವುದರಲ್ಲಿ, 1837ರಲ್ಲಿ ಬ್ರಿಟನಿನ ರಾಯಲ್ ಏಷ್ಯಾಟಿಕ್ ಸೊಸೈಟಿಗೆ ಭಾರತದ ಭೂ ಉತ್ಪಾದನ ಶಕ್ತಿಯ ಬಗ್ಗೆ ಮಾಹಿತಿ ಕೊಡುವುದರಲ್ಲಿ, 1846ರಲ್ಲಿ ಮುಂಬೈ ಸರ್ಕಾರಕ್ಕಾಗಿ ಅಂಕಿ-ಅಂಶ ಸಂಗ್ರಹಿಸುವುದರಲ್ಲಿ, 1847ರಲ್ಲಿ ಭಾರತ ಸರ್ಕಾರದ ಸೂಚನೆಯ ಮೇರೆಗೆ ಭಾರತದ ಮಧ್ಯ ಏಷ್ಯ ವಿಜ್ಞಾನ ಸಂಶೋಧನ ಸಮಿತಿಗೂ 1848ರಲ್ಲಿ ಭಾರತದ ಗುಹಾದೇವಾಲಯಗಳ ಸಂಬಂಧ ನಿಯಮಿತವಾದ ಸಮಿತಿಗೂ ದೇವಾಲಯ ಚಿತ್ರೀಕರಣ ಹಾಗೂ ಶಾಸನಸಂಗ್ರಹಣಗಳಲ್ಲಿ ಮಹತ್ತ್ವದ ಸಹಕಾರವನ್ನಿತ್ತಿತ್ತಲ್ಲದೆ, 1865ರಲ್ಲಿ ಲಿವಿಂಗ್ಸ್ಟನನಿಗೆ ಆಫ್ರಿಕದ ಅನ್ವೇಷಣೆಗಾಗಿ ಹಣ ಸಂಗ್ರಹಿಸಿಕೊಟ್ಟಿತು. ಮುಂಬೈಯ ಖಗೋಳವೀಕ್ಷಣಾಲಯ ಈ ಸಂಸ್ಥೆಯ ಸಹಾಯದಿಂದಲೇ ಸ್ಥಾಪಿತವಾಯಿತು.

ಈ ಸಂಸ್ಥೆಗೆ ಅನೇಕ ಮಹನೀಯರು ಸೇವೆ ಸಲ್ಲಿಸಿದ್ದಾರೆ. ಅವರಲ್ಲಿ ಸರ್ ಜೇಮ್ಸ್‌ ಮ್ಯಾಕಿಂಟಾಷ್, ಜೆ. ಕ್ಯಾಂಬೆಲ್, ಎಂ.ಎಸ್. ಎಲ್ಫಿನ್ಸ್ಟನ್, ಜಾನ್ವಿಲ್ಸನ್, ಮಾಲ್ಕಮ್ಸನ್, ವ್ಯಾನ್ಸ್‌ ಕೆನಡಿ, ಎ.ಎ.ಮ್ಯಾಕ್ಡನೆಲ್, ಜಾರ್ಜ್ ಗ್ರಿಯರ್ಸನ್, ಆರ್.ಜಿ. ಭಂಡಾರ್ಕರ್, ಕೆ.ಟಿ. ತೆಲಂಗ್, ಭಾವು ದಾಜಿ, ವಿ.ಎಸ್. ಸುಕ್ತಂಕರ್ ಹಾಗೂ ಪಿ.ವಿ. ಕಾಣೆ ಇವರು ಮುಖ್ಯರಾದ ಕೆಲವರು.               (ಎಂ.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ